ಕರ್ಣಪರ್ವದ ಈ 6ನೆ ಸಂಧಿಯಲ್ಲಿ ಪರಮಶಿವ ತ್ರಿಪುರಗಳ ಸಂಹಾರಕ್ಕೆ ಮುಂದಾಗುವಾಗ ದೇವತೆಗಳನ್ನು ಕುರಿತು ವೇದಾಂತ ಉಪದೇಶ ಮಾಡುತ್ತಾನೆ. ಇದನ್ನು ಪಾಶುಪತ ಮತ ಎಂದು ಹೆಸರಿಸಿದ್ದಾನೆ ಕುಮಾರವ್ಯಾಸ.
ಈ ಅಧ್ಯಾಯದ ಕೆಲವು ಪದ್ಯಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ:
https://www.sallapa.com/2022/05/116.html
ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನುಸುರಿದರು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ ೧೪
(ಶಿವನನ್ನು ವೇದಸಿದ್ಧ ವಿಶುದ್ಧ ದೈವ ಎಂದಿದ್ದಾನೆ ಕವಿ)
ಜಾರಿದುಬ್ಬಿನ ಹೊತ್ತ ದುಗುಡದ
ಮೋರೆಗಳ ಮೋನದ ನಿಹಾರದ
ದೂರುಗಂಗಳ ದೇವ ನಿಕರವ ಕಂಡು ಕರುಣದಲಿ
ಏರುವಡೆದುದು ಮನವವಿದ್ಯೆಗೆ
ಮಾರುವೋದಿರಲಾ ಎನುತ ಶಿವ
ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ
(ಕರ್ಣ ಪರ್ವ, ೬ ಸಂಧಿ, ೨೫ ಪದ್ಯ)
ತಾತ್ಪರ್ಯ:
ನೀವೆಲ್ಲರು ಪಶುಗಳಾಗಿರೆಂದ ಶಿವನ ಮಾತುಗಳನ್ನು ಕೇಳಿದ ದೇವತೆಗಳಿಗೆ ಉತ್ಸಾಹ ತಗ್ಗಿತು, ಮುಖಗಳು ದುಃಖದಿಂದ ಸೊಪ್ಪಾದವು. ಮೌನವನ್ನು ಹಿಡಿದು, ದೂರುವ ಕಣ್ಣುಗಳಿಂದ ಶಿವನನ್ನು ನೋಡಿದರು. ಆಗ ಶಿವನು ನಿಮ್ಮ ಮನಸ್ಸಿಗೆ ನೋವಾಗಿದೆ, ಅವಿದ್ಯೆಗೆ ನೀವು ಮಾರುಹೋಗಿದ್ದೀರಿ ಎಂದು ಪಾಶುಪತ್ಯದ ಸಾರವನ್ನು ಅವರಿಗೆ ತಿಳಿಸಿದನು.
ಕಂತುಹರನನು ವಿಮಳನನು ವೇ
ದಾಂತ ವೇದ್ಯನನದ್ವೀತಿಯನ
ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ
ಅಂತ್ಯರಹಿತನನಪ್ರಮೇಯನ
ನಂತರೂಪನನಂಘ್ರಿಭಜಕ ಭ
ವಾಂತಕನನುದ್ದಂಡ ದೈವವ ಕಂಡನಬುಜಭವ
(ಕರ್ಣ ಪರ್ವ, ೬ ಸಂಧಿ, ೧೮ ಪದ್ಯ)
ತಾತ್ಪರ್ಯ:
ಮನ್ಮಥನನ್ನು ಸುಟ್ಟವನು (ಕಾಮವನ್ನು ಗೆದ್ದವನು), ನಿರ್ಮಲನೂ, ವೇದಾಂತದಿಂದ ತಿಳಿಯಲ್ಪಡುವವನೂ ಜ್ಞಾನವುಳ್ಳವನೂ, ತನಗೆರಡನೆದಿಲ್ಲದವನೂ, ಚಿಂತನೆಗೆ ನಿಲುಕದ ಮಹಿಮೆಯುಳ್ಳವನೂ, ಪ್ರಮೇಯಗಳಿಂದ ಸಿದ್ಧನಾಗದವನೂ, ಅನಂತ ರೂಪಗಳುಳ್ಳವನೂ, ಸಚ್ಚಿದಾನಂದ ಸ್ವರೂಪನೂ, ಏಕರಸವುಳ್ಳವನೂ, ಅನಂಘ್ರಿಭಜಕನು (ಬೇರೆ ಯಾರನ್ನೂ ಭಜಿಸದವ), ತನ್ನ ಭಕ್ತರ ಸಂಸಾರದ ಬಂಧನಗಳನ್ನು ಕೊನೆಗೊಳಿಸಿ ಮುಕ್ತಿಕೊಡುವವನೂ ಆದ ಶಿವನನ್ನು ಬ್ರಹ್ಮನು ನೋಡಿದನು.
ಕೊರಳ ಕಪ್ಪಿನ ಚಾರು ಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧ ಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನುಬುಜಭವ
(ಕರ್ಣ ಪರ್ವ, ೬ ಸಂಧಿ, ೧೬ ಪದ್ಯ)
ತಾತ್ಪರ್ಯ:
ಬ್ರಹ್ಮನಾದಿಯಾಗಿ ಎಲ್ಲಾ ದೇವತೆಗಳು ಶಿವನ ಬಳಿಗೆ ಬಂದರು. ಹಾಲಹಲ ವಿಷವನ್ನು ಕುಡಿದಿದ್ದರಿಂದ ಕಪ್ಪಾಗಿದ್ದ ಕಂಠವನ್ನುಳವನೂ, ಚಂದ್ರನನ್ನೇ ಆಭರಣವನ್ನಾಗಿಸಿದವನೂ, ಹಣೆಗಣ್ಣನೂ, ಪರಿಮಳಭರಿತ ದೇಹನೂ, ಕೆಂಜೆಡೆಯುಳ್ಳವನೂ, ಅವಿದ್ಯೆಯನ್ನು ಕಾಯಿಸಿ ಬೇರೆ ಕಡೆಗಿಟ್ಟು ಶುದ್ಧ ಬ್ರಹ್ಮವನ್ನೇ ಕಡೆದು ಮಾಡಿದ ಮೂರ್ತಿಯೂ ಆದ ಶಿವನನ್ನು ಬ್ರಹ್ಮನು ನೋಡಿದನು.
ವೇದವರಿಯದ ತರ್ಕವಿದ್ಯಾ
ವಾದ ನಿಲುಕದ ಬುಧರ ಮತಿ ಸಂ
ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ
ಹೋದ ಹೊಲಬಳವಡದ ಬ್ರಹ್ಮೇಂ
ದ್ರಾದಿ ಸುರರುಬ್ಬಟೆಗೆ ಸೋಲದ
ನಾದಿ ದೇವರದೇವ ಶಿವನನು ಕಂಡನಬುಜಭವ
(ಕರ್ಣ ಪರ್ವ, ೬ ಸಂಧಿ, ೧೭ ಪದ್ಯ)
ತಾತ್ಪರ್ಯ:
ವೇದವು ಅರಿಯದ, ತರ್ಕವಿದ್ಯೆಯ ವಾದಕ್ಕೆ ನಿಲುಕದ, ವಿದ್ವಾಂಸರು ಶೇಖರಿಸಿದ ವಿದ್ಯೆಯತ್ತ ಮುಖವನ್ನೂ ತೋರಿಸದ, ತರ್ಕದಿಂದ ತನ್ನನ್ನು ಅರಿಯುವ ದಾರಿಯೇ ಸಿಗದ, ಬ್ರಹ್ಮ ಇಂದ್ರಾದಿಗಳಿಗೆ ಸೋಲದ, ಅನಾದಿಯೂ ದೇವರ ದೇವನೂ ಆದ ಶಿವನನ್ನು ಬ್ರಹ್ಮನು ಕಂಡನು.
ಶಿವನು ಯಾರ ಮಧ್ಯದಲ್ಲಿ ನೆಲಸಿದ್ದ?
ಇದ್ದುದಗಣಿತ ರುದ್ರ ಕೋಟಿಗ
ಳಿದ್ದುದನುಪಮ ವಿಷ್ಣು ಕೋಟಿಗ
ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ
(ಕರ್ಣ ಪರ್ವ, ೬ ಸಂಧಿ, ೧೯ ಪದ್ಯ)
ತಾತ್ಪರ್ಯ:
ಲೆಕ್ಕವಿಲ್ಲದಷ್ಟು ಕೋಟಿ ರುದ್ರರು, ವಿಷ್ಣುಗಳು ಅಲ್ಲಿದ್ದರು. ನೂರು ಕೋಟಿ ಬ್ರಹ್ಮ ಇಂದ್ರರು ಇದ್ದರು. ಕೋಟಿ ವೇದಗಳೂ ಲೆಕ್ಕವಿಲ್ಲದಷ್ಟು ಮಂತ್ರಗಳೂ ಇದ್ದವು. ಮಧ್ಯದಲ್ಲಿ ಶಿವನಿದ್ದನು.
ಪಶುಪತಿತ್ವವ ನಮಗೆ ಕೊಡಿ ನೀವ್
ಪಶುಗಳಾಗಿರಿ ಪಾಶುಪತ ವರ
ನಿಶಿತ ಶರದಲಿ ದೈತ್ಯ ದುರ್ಗವನುರುಹಿ ತೋರುವೆವು
ದೆಸೆದೆಸೆಗೆ ಹರೆದಖಿಳದೇವ
ಪ್ರಸರವನು ನೀವ್ ನೆರಹಿ ಮೇಲಿ
ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ ೨೪
ತಾತ್ಪರ್ಯ:
ಅಲ್ಲಿ ನೆರೆದಿದ್ದ ದೇವತೆಗಳೆಲ್ಲರನ್ನು ಶಿವನು ಸಂಭೋದಿಸುತ್ತಾ, ನೀವು ನನಗೆ ಪಶುಪತಿತ್ವವನ್ನು ನೀಡಿರಿ, ನೀವೆಲ್ಲರು ಪಶುಗಳಾಗಿ, ಪಾಶುಪತಾಸ್ತ್ರದಿಂದ ರಾಕ್ಷಸರ ಭದ್ರಕೋಟೆಯನ್ನು ಸುಟ್ಟು ಹಾಕುತ್ತೇವೆ. ಎಲ್ಲಾ ದಿಕ್ಕುಗಳಲ್ಲಿ ಹರಡಿದ್ದ ದೇವತೆಗಳೆಲ್ಲರನ್ನು ಒಟ್ಟುಗೂಡಿಸಿ ನೀವು ಚಿಕ್ಕಪುಟ್ಟ ಗಾಯಗಳಿಗೆ ಹೆದರದಿರಿ ಎಂದು ನಗುತ್ತಾ ಅಭಯವನ್ನು ನೀಡಿದನು.
ಕರ್ಮಕಿಂಕರರಾಗಿ ಕೃತ ದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿ ಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ ೨೬|
ತಾತ್ಪರ್ಯಃ
ಆತ್ಮಾ ಯಾವ ಕರ್ಮವನ್ನೂ ಮಾಡುವುದಿಲ್ಲ. ಆದರೆ ಅಹಂಕಾರದಿಂದ ಒಬ್ಬ ತಾನೇ ಕರ್ಮಗಳನ್ನು ಮಾಡುವುದಾಗಿ ಭ್ರಮಿಸಿ ‘ನಾನು ಕರ್ತಾ ಭೋಕ್ತಾ ಸಂಸಾರೀ’ ಎಂದು ತನ್ನನ್ನು ತಪ್ಪಗಿ ತಿಳಿಯುತ್ತಾನೆ.
ಪಂಚವಿಂಶತಿ ತತ್ವರೂಪದ
ಸಂಚವರಿಯದೆ ನೀತಿಮುಖದಲಿ
ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ
ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮ
ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ ೨೭
ಪಾಶುಪತ ಮತದಲ್ಲಿ 25 ತತ್ತ್ವಗಳು.
ಜಗತ್ತು ಬರೀ ತೋರಿಕೆಯಷ್ಟೇ, ನಿಜಕ್ಕೂ ಬ್ರಹ್ಮವೇ.
ತೋರುವೀ ಜಗವೆಲ್ಲ ಬೊಮ್ಮವೆ
ತೋರುತಿದೆಯೆನಿಪರ್ಥದಲಿ ಸಲೆ
ತೋರುವೀ ಜಗಕೆಲ್ಲ ಪರತತ್ವದಲಿ ಪರಿಣಾಮ
ತೋರುವೀ ತೋರಿಕೆಯೊಳಗೆ ಸಲೆ
ಮೀರಿ ತೋರುವ ನಿಜವನರಿಯದ
ಗಾರುಗಳು ನೀವ್ ಪಶುಗಳೆಂದರೆ ಖೇದವೇಕೆಂದ
(ಕರ್ಣ ಪರ್ವ, ೬ ಸಂಧಿ, ೨೮ ಪದ್ಯ)
ತಾತ್ಪರ್ಯ:
ಜಗತ್ತು ತೋರುತ್ತಿದೆಯಲ್ಲಾ ಅದು ಬ್ರಹ್ಮವೇ, ಅದೇ ಜಗತ್ತಾಗಿ ತೋರುತ್ತಿದೆ. ಆದುದರಿಂದ ಇದಕ್ಕೆ ಪರತತ್ವದಲ್ಲೇ ಪರಿಣಾಮ ಕಾಣಿಸುವ ಈ ತೋರಿಕೆಯನ್ನು ಮೀರಿ, ಎಂದೂ ಬದಲಾಗದ ಆತ್ಮವನ್ನು ತಿಳಿಯದಿರುವ ಅಲ್ಪರಾದ ನಿಮ್ಮನ್ನು ಪಶುಗಳೆಂದರೆ ನಿಮಗೇಕೆ ದುಃಖವಾಗುತ್ತಿದೆ ಎಂದು ಶಂಕರನು ಕೇಳಿದನು.
ಆಧಿಭೌತಿಕದಿಂದ ನೊಂದು ವಿ
ರೋಧಿ ಷಡ್ವರ್ಗದ ವಿಕಾರ
ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು
ವಾದ ರಚನೆಯ ಬಲೆಗೆ ಸಿಲುಕಿ ವಿ
ರೋಧಗೊಂಬೀ ಮೋಹ ವಿದ್ಯಾ
ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ
(ಕರ್ಣ ಪರ್ವ, ೬ ಸಂಧಿ, ೨೯ ಪದ್ಯ)
ತಾತ್ಪರ್ಯ:
ಪ್ರಕೃತಿಯ ದೆಸೆಯಿಂದಾಗುವ ತಾಪದಿಂದ ನೊಂದು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಶತ್ರುಗಳಿಂದಾಗುವ ವಿಚಾರವೆಂಬ ರೋಗದಿಂದ ಬೆಂಡೆದ್ದು ಸಂಸಾರ ಪಾಶದಿಂದ ಕಟ್ಟುವಡೆದು ವೃಥಾವಾದಗಳಿಂದಾಗುವ ಬಲೆಗೆ ಸಿಕ್ಕು ಸತ್ಯಕ್ಕೆ ವಿರೋಧವಾದ ಮೋಹ ವಿದ್ಯೆಯ ಸಾಧಕರಾದ ನೀವು ಪಶುಗಳೆಂದರೆ ನಿಮಗೇಕೆ ದುಃಖ ಎಂದು ಶಂಕರನು ದೇವತೆಗಳನ್ನು ಜರಿದನು.
ಈ ಮೇಲೆ ಕಾಣಿಸಿದ ಪದ್ಯಗಳ ಮುಖ್ಯ ಪ್ರಮೇಯಗಳು:
- ಶಿವ ವೇದಸಿದ್ಧ ದೇವತೆ. ವೇದಪ್ರತಿಪಾದ್ಯ, ಬೇರೆ ಪ್ರಮಾಣಗಳಿಗೆ ನಿಲುಕದ ತತ್ತ್ವ.
- ಜೀವರಿಗೆ ಅವಿದ್ಯೆಯಿದೆ. ಆದ್ದರಿಂದ ಸಂಸಾರೆ.
- ಉಪನಿಷತ್ತುಗಳಲ್ಲಿ ಪರಬ್ರಹ್ಮಕ್ಕೆ ಕೊಡಲಾಗುವ ವಿಶೇಷಣಗನ್ನು ಇಲ್ಲಿ ಪರಮಶಿವನಿಗೆ ಕೊಡಲಾಗಿದೆ: ಏಕರಸ, ಅನಂತರೂಪ, ಬೇರೆ ಯಾರನ್ನೂ ಭಜಿಸದವ, ಮೋಕ್ಷ ಕೊಡುವವ ಎಂದು ಮುಂತಾಗಿವೆ.
- ಶಿವ ಅವಿದ್ಯಾರಹಿತ ಬ್ರಹ್ಮ ಸ್ವರೂಪ.
- ಬ್ರಹ್ಮೇಂದ್ರಾದಿಗಳಿಗೆ ಸೋಲದವ.
- ಅವಿದ್ಯಾಸಂಬಂಧವಿಲ್ಲದ ಶುದ್ಧ ಬ್ರಹ್ಮ ಸ್ವರೂಪ ಶಿವ.
- ಶಿವ ಇದ್ದ ಸ್ಥಾನ: ಕೋಟಿ ಕೋಟಿ ರುದ್ರರು, ವಿಷ್ಣುಗಳು ಇದ್ದ ಜಾಗ.
- ಆತ್ಮಾ ನಿಜಕ್ಕೂ ಅಕತ್ರಾ, ಅಭೋಕ್ತಾ.
- 25 ತತ್ತ್ವಗಳು ಪಾಶುಪತ ಮತದಲ್ಲಿ. ಜಗತ್ತು ಬರೀ ತೋರಿಕೆಯಷ್ಟೇ, ನಿಜಕ್ಕೂ ಬ್ರಹ್ಮವೇ. ‘ಸರ್ವಂ ಖಲ್ವಿದಂ ಬ್ರಹ್ಮ’.
- ಪರಮಶಿವ ಪರಬ್ರಹ್ಮ
ಹೀಗೆ ವೇದಾಂತದ ಪ್ರಮೇಯಗಳನ್ನು ಅತಿ ಸ್ಪಷ್ಟವಾಗಿ ಇಲ್ಲಿ ಕವಿ ‘ಇದು ಪಾಶುಪತ ಮತ’ ಎಂದು ಹೇಳಿದ್ದಾನೆ.
ಈ ಪ್ರಮೇಯಗಳು ಅದ್ವೈತದಲ್ಲಿ ಮಾತ್ರ ಅನ್ವಯಿಸುತ್ತೆ. ಇತರ ಮತಗಳಿಗೆ ಇವು ಅತ್ಯಂತ ಬಾಧಕವಾದವು.
ಈ ಪಾಶುಪತ ಪಾಶುಪತ ವ್ರತವಾಗಿ ಅಥರ್ವಶಿರಾ ಉಪನಿಷತ್ತಲ್ಲಿದೆ:
https://satsangdhara.net/upa/atharvashira.htm
बुद्ध्या संचितं स्थापयित्वा तु रुद्रे रुद्रं एकत्वमाहुः । रुद्रो हि शाश्वतेन वै पुराणेन एषमूर्जेण तपसा नियन्ता । अग्निरिति भस्म, वायुरिति भस्म, जलमिति भस्म, स्थलमिति भस्म, व्योमेति भस्म, सर्वं ह वा इदं भस्म, मन एतानि चक्षूंषि भस्मानि, यस्माद् व्रतमिदं पाशुपतं यद्भस्मनाङ्गानि संस्पृशेत् तस्माद्ब्रह्म, तदेतत् पाशुपतं पशुपाश विमोक्षणाय ॥ ५ ॥

ಓಂ ತತ್ ಸತ್